ಸೋಮನಾಥಪುರ

	ಭಾರತದ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲ್ಲೂಕಿನಲ್ಲಿರುವ ಒಂದು ಗ್ರಾಮ. ಕಸಬೆಗೆ 10 ಕಿಮೀ, ಮೈಸೂರಿಗೆ 40 ಕಿಮೀ ದೂರದಲ್ಲಿ ಕಾವೇರಿ ನದಿಯ ಎಡದಂಡೆಯ ಮೇಲಿದೆ.

	13ನೆಯ ಶತಮಾನದಲ್ಲಿ ಇದೊಂದು ಅಗ್ರಹಾರವಾಗಿತ್ತು. ಈ ಅಗ್ರಹಾರಕ್ಕೆ ಸರ್ವನಮಸ್ಯ ಮಹಾಗ್ರಹಾರ ವಿದ್ಯಾನಿಧಿಪ್ರಸನ್ನ ಸೋಮನಾಥಪುರ ಅಥವಾ ಚತುರ್ವೇದಿಮಂಗಲ ವಿದ್ಯಾನಿಧಿಪ್ರಸನ್ನ ಸೋಮನಾಥಪುರ ಎಂಬ ಹೆಸರಿದ್ದಿತು. ಈ ಊರಿನಲ್ಲಿರುವ ಏಳು ಶಾಸನಗಳಲ್ಲದೆ ಹರಿಹರದಲ್ಲಿರುವ ಒಂದು ಶಾಸನವೂ ಹೆಬ್ಬಕವಾಡಿಯಲ್ಲಿ ರುವ ಮತ್ತೊಂದು ಶಾಸನವೂ ಈ ಅಗ್ರಹಾರದ ಬಗೆಗೆ, ಇಲ್ಲಿನ ದೇವಾಲಯಗಳ ಬಗೆಗೆ ಸಾಕಷ್ಟು ವಿವರಗಳನ್ನೊದಗಿಸುತ್ತವೆ. ಕಲೆ ಹಾಗೂ ವಿದ್ಯೆಗೆ ಈ ಅಗ್ರಹಾರ ಆಗರವಾಗಿತ್ತೆಂದು ಶಾಸನಗಳು ವರ್ಣಿಸುತ್ತವೆ. ಹೊಯ್ಸಳ ಚಕ್ರವರ್ತಿ ಮುಮ್ಮಡಿ ನರಸಿಂಹನ ಆಳಿಕೆಯ ಕಾಲದಲ್ಲಿ ಆತನ ಸಂಧಿವಿಗ್ರಹಿಯೂ ಮಂತ್ರಿಯೂ ದಂಡನಾಯಕನೂ ಆಗಿದ್ದ ಸೋಮನಾಥ ಈ ಅಗ್ರಹಾರವನ್ನು ಸು. 1258ರಲ್ಲಿ ನಿರ್ಮಿಸಿ, ತನ್ನ ಹೆಸರಿನಿಂದ ಸೋಮನಾಥಪುರವೆಂದು ಕರೆದು, ಇಲ್ಲಿ ಒಂದು ವಿಷ್ಣು ದೇವಾಲಯವನ್ನೂ (ಕೇಶವ) ಒಂದು ಶಿವಾಲಯವನ್ನೂ (ಪಂಚಲಿಂಗ) ಕಟ್ಟಿಸಿದ. ಈ ದೇವಾಲಯಗಳಲ್ಲದೆ ಕಾವೇರಿ ನದಿಯ ದಡಕ್ಕೆ ಹೊಂದಿಕೊಂಡಂತೆ ಲಕ್ಷ್ಮೀನರಸಿಂಹ, ಯೋಗನಾರಾಯಣ ಮತ್ತು ನಾರಸಿಂಹೇಶ್ವರ ದೇವಾಲಯಗಳನ್ನೂ ಪಂಚಲಿಂಗ ದೇವಾಲಯದ ಬಳಿ ಸೋವಲೇಶ್ವರವೆಂಬ ಮತ್ತೊಂದು ಶಿವದೇವಾಲಯವನ್ನೂ ಈತ ಕಟ್ಟಿಸಿದುದಾಗಿ ತಿಳಿದುಬರುತ್ತದೆ.

	ಕೇಶವ ದೇವಾಲಯ ಮೂರು ಗರ್ಭಗೃಹಗಳುಳ್ಳ ತ್ರಿಕೂಟಾಚಲ. ಬೇಲೂರಿನ ಚೆನ್ನಕೇಶವ ದೇವಾಲಯಕ್ಕಿಂತ ಸಣ್ಣದಾಗಿದ್ದರೂ ಇಲ್ಲಿ ಕೆತ್ತನೆಯ ಅಲಂಕಾರದ ಕೆಲಸಗಳು ಹೆಚ್ಚು. ಹಾಗಾಗಿ ಇದು ಉತ್ತಮ ಹೊಯ್ಸಳ ದೇವಾಲಯವೆಂದು ಪರಿಗಣಿತವಾಗಿದೆ.

	ಈ ದೇವಾಲಯ 218† ಉದ್ದ, 117† ಅಗಲದ ಚತುರಸ್ರಾಕಾರದ ಅಂಗಳದ ಮಧ್ಯದಲ್ಲಿದೆ. ಈ ಅಂಗಳದ ಒಳಭಾಗದಲ್ಲಿ ಪ್ರಾಕಾರದ ಗೋಡೆಗೆ ಸೇರಿದಂತೆ ಎರಡು ಅಂಕಣಗಳ 64 ಕೈಸಾಲೆ ಮಂಟಪಗಳಿವೆ. ದೇವಾಲಯ ಪೂರ್ವಾಭಿಮುಖವಾಗಿದ್ದು ಮೂರು ಅಡಿಯ ಜಗತಿಯ ಮೇಲೆ ನಿಂತಿದೆ. ಜಗತಿಯನ್ನು ಹತ್ತಲು ಮೆಟ್ಟಲುಗಳಿದ್ದು ಅವುಗಳ ಎರಡು ಪಾಶ್ರ್ವಗಳಲ್ಲಿಯೂ ಸಣ್ಣ ದೇವಾಲಯಗಳಿವೆ. ಜಗತಿಯು ಹದಿನಾರು ಕೋಣಗಳ ನಕ್ಷತ್ರಾಕಾರದ್ದಾಗಿದ್ದು, ಅದರ ಕೆಳಭಾಗದ ಮೂಲೆಗಳಲ್ಲಿ, ಕಟ್ಟಡವನ್ನು ಹೊತ್ತು ನಿಂತಿರುವಂತೆ ಆನೆಗಳು ನಿಲ್ಲಿಸಲ್ಪಟ್ಟಿವೆ. ಜಗತಿಗೆ ಒರಗಿಕೊಂಡಂತೆ ಕೆಲವು ವಿಗ್ರಹಗಳಿವೆ.

	ದೇವಾಲಯದ ಗೋಡೆಯನ್ನು ಕೆಳಭಾಗ, ಮಧ್ಯಭಾಗ ಮತ್ತು ಮೇಲ್ಭಾಗವೆಂದು ವಿಂಗಡಿಸಬಹುದು. ಕೆಳಭಾಗದ ಪಟ್ಟಿಕೆಗಳಲ್ಲಿ ಆನೆ, ಅಶ್ವಾರೋಹಿಗಳು, ಲತಾಪಟ್ಟಿಕೆ, ಪೌರಾಣಿಕ ಕಥೆಗಳ ಪಟ್ಟಿಕೆ, ಮಕರ, ಹಂಸಗಳು ಕೆತ್ತಲ್ಪಟ್ಟಿವೆ. ಈ ಪ್ರತಿಯೊಂದು ಪಟ್ಟಿಕೆಯೂ ಏಳು ಅಂಗುಲ ಅಗಲವಾಗಿವೆ. ಆನೆಗಳು ಮತ್ತು ಅಶ್ವಾರೋಹಿಗಳ ಪಟ್ಟಿಕೆಯಲ್ಲಿ ಕಾಣಬರುವ ಉಡುಗೆತೊಡುಗೆ, ಆಭರಣ, ಆಯುಧ ವಿಶೇಷಗಳು ಗಮನಾರ್ಹವಾದವು. ರಾಮಾಯಣ, ಭಾಗವತ ಮತ್ತು ಮಹಾಭಾರತದ ಕಥೆಗಳು ಪೌರಾಣಿಕ ಕಥೆಗಳ ಪಟ್ಟಿಕೆಯಲ್ಲಿ ಕಾಣಬರುತ್ತವೆ. ಪೂರ್ವದಿಂದ ಪ್ರಾರಂಭಿಸಿದರೆ ರಾಮಾಯಣದ ಕಥೆಯು ದಶರಥನ ಆಸ್ಥಾನ, ಪುತ್ರಕಾಮೇಷ್ಠಿಯಾಗದಿಂದ ಹಿಡಿದು ರಾಮ-ಸುಗ್ರೀವರ ಸ್ನೇಹದ ವರೆಗೂ ಕೆತ್ತಲ್ಪಟ್ಟಿದೆ. ಅನಂತರ ಕೃಷ್ಣಜನ್ಮದಿಂದ ಕಂಸವಧೆಯ ವರೆಗಿನ ಭಾಗವತ ಕಥೆಯಿದೆ. ಕೊನೆಯಲ್ಲಿ ಮಹಾಭಾರತದ ಕಥೆಯಿದೆ. ಈ ಪಟ್ಟಿಕೆಗಳ ಮೇಲೆ, ಗರ್ಭಗುಡಿಯ ಸುತ್ತಲೂ ಹೊರಭಾಗದಲ್ಲಿ ಸುಂದರವಾದ 194 ದೊಡ್ಡ ಶಿಲ್ಪಗಳಿವೆ. ಇವುಗಳಲ್ಲಿ ನಾರಸಿಂಹ, ಹಯಗ್ರೀವ, ವೇಣುಗೋಪಾಲ, ವರಾಹ, ಶಿವ, ಇಂದ್ರ, ಮನ್ಮಥ, ಸೂರ್ಯ, ಮಹಿಷಾಸುರಮರ್ದಿನಿ, ಸರಸ್ವತಿ ಮುಖ್ಯವಾದವು. ಈ ವಿಗ್ರಹಗಳ ಪೀಠದ ಮೇಲೆ ಇವುಗಳನ್ನು ಕೆತ್ತಿದ ಮಲ್ಲಿತಮ್ಮ, ಚೌಡಯ್ಯ, ಬಾಲಯ್ಯ, ಮಸಣಿತಮ್ಮ, ಲೋಹಿತ, ಎಲೆಮಸೈಯ್ಯ ಮೊದಲಾದ ರೂವಾರಿಗಳ ಹೆಸರುಗಳಿವೆ. ಈ ವಿಗ್ರಹಗಳ ಮೇಲಿನ ತೋರಣಗಳಲ್ಲಿ ಲತಾ ಫಲಪುಷ್ಪ, ಕೀರ್ತಿಮುಖ ಬಲು ಸೂಕ್ಷ್ಮವಾಗಿ ಶಿಲ್ಪಿತವಾಗಿವೆ. ಈ ವಿಗ್ರಹಗಳ ಮೇಲೆ ಸಣ್ಣ ಪ್ರಮಾಣದ ಶಿಖರಗಳು ಕೆತ್ತಲ್ಪಟ್ಟಿವೆ. ಎಲ್ಲಕ್ಕೂ ಮೇಲೆ ಗೋಡೆಯ ತುದಿಯಲ್ಲಿ ದೇವಸ್ಥಾನದ ಸುತ್ತಲೂ ಲೋವೆಕಲ್ಲು ಇದೆ.

	ಈ ದೇವಾಲಯದ ಮುಖ್ಯ ಆಕರ್ಷಣೆಯೆಂದರೆ ಮೂರು ಶಿಖರಗಳು. ಹದಿನಾರು ಕೋಣಗಳ ನಕ್ಷತ್ರಾಕಾರದ ವಿನ್ಯಾಸದ ಮೇಲೆ ರಚಿತವಾಗಿರುವ ಶಿಖರಗಳು ಮಧ್ಯದಲ್ಲಿ ಒಂದು, ಎರಡು ಪಾಶ್ರ್ವಗಳಲ್ಲಿ ಒಂದೊಂದರಂತೆ ಇವೆ. ಇದರಿಂದ ಈ ದೇವಾಲಯ ಬಹು ರಮ್ಯವಾಗಿ ಕಾಣುತ್ತದೆ. ಇವು ಅಷ್ಟೇನೂ ಎತ್ತರವಾಗಿಲ್ಲ. ಜಗತಿಯಿಂದ ಮೇಲಕ್ಕೆ 32† ಮಾತ್ರ. ಆಕಾರದಲ್ಲಿ ಗರ್ಭಗುಡಿಯ ಗೋಡೆಯ ಮೇಲೆ ಗೋಡೆಯ ಶೈಲಿಯನ್ನೇ ಅನುಸರಿಸಿ ನಕ್ಷತ್ರಾಕಾರವಾಗಿ ಮೇಲಕ್ಕೆ ಹೋಗುತ್ತ ಸಣ್ಣದಾಗುತ್ತ ಹೋಗುತ್ತವೆ. ಇವು ಸುಕನಾಸಿಯ ಮೇಲ್ಭಾಗದಲ್ಲಿ ಸ್ವಲ್ಪ ಮುಂದಕ್ಕೆ ಚಾಚಿಕೊಂಡಿವೆ. ಶಿಖರದ ಹಂತಗಳಲ್ಲಿ ಸಿಂಹಮುಖ, ಕೀರ್ತಿಮುಖ, ಗಂಧರ್ವರು, ಯಕ್ಷರು, ನರ್ತಕರು, ಅಷ್ಟದಿಕ್ಪಾಲಕರು ಮತ್ತು ಇತರ ಸುಂದರ ವಿಗ್ರಹಗಳಿವೆ. ಶಿಖರದ ತುದಿಯಲ್ಲಿ ಬೋಗುಣಿಯಾಕಾರದ ಮಗುಚಿ ಹಾಕಿದ ಪದ್ಮವಿದೆ. ಒಟ್ಟಿನಲ್ಲಿ ಹೇಳುವುದಾದರೆ ಈ ಮೂರು ಶಿಖರಗಳ ಹೊಂದಾಣಿಕೆ ಇಷ್ಟರಮಟ್ಟಿಗೆ ಬೇರೆ ಯಾವ ಹೊಯ್ಸಳ ದೇವಾಲಯದಲ್ಲೂ ಕಾಣಬರುವುದಿಲ್ಲ.

	ದೇವಾಲಯದಲ್ಲಿ ಒಂದು ಮುಖಮಂಟಪ, ನವರಂಗ, ಮೂರು ಗರ್ಭಗೃಹಗಳಿವೆ. ಈ ಒಂದೊಂದು ಗರ್ಭಗೃಹದ ಮುಂಭಾಗದಲ್ಲಿಯೂ ಒಂದು ಸುಕನಾಸಿ ಇದೆ. ಏಳು ಅಂಕಣದ ಮುಖಮಂಟಪ, ಒಂಬತ್ತು ಅಂಕಣದ ನವರಂಗ, ಒಂದೊಂದು ಅಂಕಣದ ಮೂರು ಸುಕನಾಸಿ ಮತ್ತು ಗರ್ಭಗೃಹಗಳ ಕಲ್ಪನೆ ಬಹು ಸುಂದರ. ಮುಖಮಂಟಪದ ಗೋಡೆಯ ಸುತ್ತಲೂ ಒಳಗೆ ಎತ್ತರವಾದ ಜಗತಿ ಇದೆ. ನವರಂಗದ ಲ್ಲಿರತಕ್ಕ ಕಂಬಗಳು ಮಧ್ಯದ ನಾಲ್ಕನ್ನು ಬಿಟ್ಟರೆ ಮಿಕ್ಕೆಲ್ಲವೂ ಒಂದೇ ರೀತಿಯಲ್ಲಿವೆ. ಮಧ್ಯದ ನಾಲ್ಕು ಕಂಬಗಳ ಬುಡದಲ್ಲಿ ಯಕ್ಷರು, ನಾಲ್ಕು ಮುಖಗಳಲ್ಲಿಯೂ ಇರುವರು; ಇವುಗಳ ಪೂರ್ವದಲ್ಲಿರುವ ಎರಡು ಕಂಬಗಳು 32 ಕೋಣಗಳ ನಕ್ಷತ್ರಾಕೃತಿಯಲ್ಲಿವೆ. ನವರಂಗದ ಮೇಲ್ಛಾವಣಿಯಲ್ಲಿ 16 ಅಂಕಣಗಳಿವೆ. ಪ್ರತಿಯೊಂದು ಅಂಕಣದಲ್ಲಿಯೂ ಭುವನೇಶ್ವರಿಗಳಿವೆ. ಮಧ್ಯದ ಭುನವೇಶ್ವರಿಯಲ್ಲಿ ಅಷ್ಟದಿಕ್ಪಾಲಕರು, ಅದರ ಮೇಲೆ 32 ಬಗ್ಗಿದ ತೊಲೆಗಳಿಂದ ಮಾಡಿದ ಕಮಾನು, ಅದರ ಮಧ್ಯದಲ್ಲಿ ತೂಗಾಡುವ ರೀತಿಯ ಕಮಲದ ಮೊಗ್ಗು ಇವೆ. ಪೂರ್ವದ್ವಾರದ ಭುವನೇಶ್ವರಿ ಅತ್ಯಂತ ಸುಂದರವಾಗಿದೆ. ಇದರಲ್ಲಿ ಅಷ್ಟದಿಕ್ಪಾಲಕರು, ಅವರ ಪರಿವಾರ, ನರ್ತಕರ ಮೇಲೆ ಮೂವತ್ತೆರಡು ಶಿಖರಗಳು, ಮಧ್ಯೆ ಶೈವ, ವೈಷ್ಣವ ವಿಗ್ರಹಗಳ ಮಧ್ಯದಲ್ಲಿ ನಾಲ್ಕು ಅಡಿ ಉದ್ದದ ಕಮಲದ ಮೊಗ್ಗು ಜೋಲಾಡುತ್ತಿದೆ. ಭುವನೇಶ್ವರಿಗಳಲ್ಲಿ ಕಾಣಬರುವ ವೈವಿಧ್ಯ, ತೊಡಕಿನ ಮಾದರಿಗಳು, ಸೂಕ್ಷ್ಮಪ್ರಮಾಣದ ವಿಗ್ರಹಗಳು, ಕೆತ್ತನೆಗಳು ಬೆರಗುಗೊಳಿಸುತ್ತವೆ.

	ಈ ದೇವಾಲಯದ ಮೂರು ಗರ್ಭಗೃಹಗಳ ಪೈಕಿ ಉತ್ತರ ಗರ್ಭಗೃಹದಲ್ಲಿ ಜನಾರ್ದನ ವಿಗ್ರಹವೂ ದಕ್ಷಿಣ ಗರ್ಭಗೃಹದಲ್ಲಿ ವೇಣುಗೋಪಾಲ ವಿಗ್ರಹವೂ ಇವೆ. ಮಧ್ಯದ ಗರ್ಭಗೃಹದಲ್ಲಿ ಹಿಂದೆ ಕೇಶವನ ವಿಗ್ರಹವಿದ್ದಿತೆಂದು ಹೇಳುತ್ತಾರಾದರೂ ಈಗ ಯಾವ ವಿಗ್ರಹವೂ ಇಲ್ಲ. ಜನಾರ್ದನ ಮತ್ತು ವೇಣುಗೋಪಾಲ ವಿಗ್ರಹಗಳು ಸುಂದರವಾಗಿವೆ. ವೇಣುಗೋಪಾಲ ವಿಗ್ರಹ ನಾಲ್ಕೂವರೆ ಅಡಿ ಎತ್ತರವಿದೆ. ಈ ದೇವಾಲಯದ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಗರ್ಭಗೃಹ ಮತ್ತು ಸುಕನಾಸಿಯ ಬಾಗಿಲುವಾಡಗಳು. ಇವು ಬಲು ಸೂಕ್ಷ್ಮ ಕೆತ್ತನೆ ಕೆಲಸದಿಂದ ಕೂಡಿವೆ. ಪಶ್ಚಿಮ ಸುಕನಾಸಿ ದ್ವಾರದ ಮೇಲೆ ಕೇಶವ, ಗಜಲಕ್ಷ್ಮೀ, ವೈಕುಂಠನಾರಾಯಣನ ಶಿಲ್ಪಗಳಿವೆ. ಪಶ್ಚಿಮ ಗರ್ಭಗುಡಿಯ ಬಾಗಿಲುವಾಡದ ಮೇಲೆ ಲಕ್ಷ್ಮೀನಾರಾಯಣ ವಿಗ್ರಹವಿದೆ. ಉತ್ತರ ಸುಕನಾಸಿಯ ದ್ವಾರದ ಮೇಲೆ ದ್ವಾರಪಾಲಕರು, ಜನಾರ್ದನ, ಲಕ್ಷ್ಮೀನೃಸಿಂಹ ವಿಗ್ರಹಗಳಿವೆ. ಉತ್ತರ ಗರ್ಭಗೃಹದಲ್ಲಿರುವ ಜನಾರ್ದನ ವಿಗ್ರಹ ಆರು ಅಡಿ ಎತ್ತರವಾಗಿದ್ದು ಒಂದೂವರೆ ಅಡಿ ಎತ್ತರದ ಪೀಠದ ಮೇಲಿದೆ. ಶಂಖ ಚಕ್ರ ಗದಾ ಪದ್ಮಗಳನ್ನು ಹಿಡಿದು ನಿಂತಿರುವ ಈ ಶಿಲ್ಪ ಬಲು ಸುಂದರವಾಗಿದೆ. ಈ ವಿಗ್ರಹದ ಪ್ರಭಾವಳಿಯಲ್ಲಿ ದಶಾವತಾರದ ಚಿತ್ರಗಳು ಸೂಕ್ಷ್ಮವಾಗಿ ಶಿಲ್ಪಿತವಾಗಿವೆ.

	ಈ ದೇವಾಲಯದ ಕೆಲವು ಪ್ರಮುಖ ಶಿಲ್ಪಗಳಲ್ಲಿ ತಾಂಡವ ಗಣಪತಿಯ ಶಿಲ್ಪ ಗಮನಾರ್ಹವಾದುದು. ದಂತ, ಅಭಯಹಸ್ತ, ಪದ್ಮ ಮತ್ತು ಕಡುಬನ್ನು ಕೈಗಳಲ್ಲಿ ಹಿಡಿದಿರುವ ಗಣೇಶನ ವಿಗ್ರಹ ನೃತ್ಯದ ಭಂಗಿಯಲ್ಲಿದೆ. ಗಣೇಶನ ಎರಡು ಪಕ್ಕಗಳಲ್ಲಿ ವಾದ್ಯಗಳನ್ನು ನುಡಿಸುವ ಸ್ತ್ರೀಯರಿದ್ದಾರೆ. ಅವರ ಪಕ್ಕದಲ್ಲಿ ಮುನಿಗಳಿದ್ದಾರೆ. ಇನ್ನೊಂದು ಆಕರ್ಷಕ ಶಿಲ್ಪವೆಂದರೆ ನೃತ್ಯಸರಸ್ವತಿ. ನಂಜಯ್ಯನೆಂಬ ರೂವಾರಿ ಕೆತ್ತಿದ ಈ ಶಿಲ್ಪದಲ್ಲಿ ಅಷ್ಟಭುಜೆಯಾದ ಸರಸ್ವತಿ ನೃತ್ಯ ಭಂಗಿಯಲ್ಲಿದ್ದಾಳೆ. ಎರಡು ಪಕ್ಕದಲ್ಲಿ ವಾದ್ಯವನ್ನು ನುಡಿಸುವ ಸ್ತ್ರೀಯರಿದ್ದಾರೆ. ಮಲ್ಲಿತಮ್ಮನ ನೃತ್ಯಲಕ್ಷ್ಮಿಯೂ ಒಂದು ಉತ್ತಮ ಶಿಲ್ಪ. ಕೂರ್ಮಾವತಾರ, ಮತ್ಸ್ಯಾವತಾರ, ಶಚೀ ಮತ್ತು ಇಂದ್ರ ಐರಾವತದ ಮೇಲೆ ಕುಳಿತಿರುವುದು, ಬ್ರಹ್ಮ, ಮಸಣಿತಮ್ಮನ ರತಿ ಮನ್ಮಥ, ಚಾಮಯ್ಯನ ಪರಶುರಾಮ, ಮಾರಣನು ಕೆತ್ತಿದ ಯಮ, ಮಲ್ಲಿತಮ್ಮನ ಕಲ್ಕಿ ಮತ್ತು ಮಹಿಷಾಸುರಮರ್ದಿನಿ ಮುಂತಾದವು ಹೊಯ್ಸಳ ಶಿಲ್ಪಕ್ಕೆ ಉತ್ತಮ ಉದಾಹರಣೆಗಳು.	(ಎ.ವಿ.ಎನ್.)

	ಕೇಶವ ದೇವಾಲಯಕ್ಕೆ ಈಶಾನ್ಯದಲ್ಲಿ ಸು. 250 ಮೀ ಅಂತರ ದಲ್ಲಿರುವ ಪಂಚಲಿಂಗೇಶ್ವರ ದೇವಾಲಯ 5 ಗರ್ಭಗೃಹಗಳುಳ್ಳ ಪಂಚಕೂಟಾಚಲ. ಇವು ಒಂದು ಸಾಲಿನಲ್ಲಿದ್ದು ಅವುಗಳಲ್ಲಿನ ಲಿಂಗಗಳಿಗೆ ಬಿಜ್ಜಲೇಶ್ವರ, ಹೆಮ್ಮೇಶ್ವರ ಅಥವಾ ಪೆರ್ಗಡೇಶ್ವರ, ರೇವಲೇಶ್ವರ, ಬಯಿರಲೇಶ್ವರ ಮತ್ತು ಸೋಮನಾಥೇಶ್ವರ ಎಂಬ ಹೆಸರಿದೆ (ಈ ಪಂಚಲಿಂಗೇಶ್ವರ ದೇವಾಲಯದ ಸಮೀಪದಲ್ಲಿಯೇ ನಿರ್ಮಿಸಿದ್ದ ಮತ್ತೊಂದು ಶಿವದೇವಾಲಯದಲ್ಲಿದ್ದುದು ಸೋವಲೇಶ್ವರಲಿಂಗ). ಈ ದೇವಾಲಯಗಳು ಕಗ್ಗಲ್ಲಿನಲ್ಲಿ ನಿರ್ಮಿತವಾಗಿವೆ. ಒಂದೊಂದರಲ್ಲಿಯೂ ಒಂದು ಗರ್ಭಗೃಹ, ಒಂದು ಸುಕನಾಸಿ ಮುಂದೆ ಒಂಬತ್ತು ಅಂಕಣಗಳ ತೆರೆದ ಮಂಟಪಗಳಿವೆ. ಸುಕನಾಸಿಗಳ ಮುಂಭಾಗದ ಒಂದು ಸಾಲು ಅಂಕಣಗಳು ಮಾತ್ರ ಒಂದಕ್ಕೊಂದು ಜೋಡಿಸಲ್ಪಟ್ಟು ಈ ಐದು ದೇವಾಲಯಗಳನ್ನೂ ಒಂದಾಗಿ ಸೇರಿಸಿರುವ ನೀಳವಾದ ಮೊಗಸಾಲೆ ಯಾಗಿದೆ. ಉಳಿದಂತೆ ದೇವಾಲಯಗಳು ಬೇರೆ ಬೇರೆಯೆ. ಈ ದೇವಾಲಯಗಳಿಗೆ ಜಗತಿಯಿಲ್ಲ. ಚೌಕವಿನ್ಯಾಸದಲ್ಲಿರುವ ಗರ್ಭಗೃಹಗಳ ಹೊರಗೋಡೆಗಳ ಬುಡದಲ್ಲಿ ಮೂರು ಸರಳವಾದ ಕಾರ್ನೀಸುಗಳೂ ಗೋಡೆಗಳ ಮೇಲೆ ಅಲ್ಲಲ್ಲಿ ಅರೆಗಂಬಗಳೂ ಅರೆಗಂಬಗಳ ನಡುವೆ ದೊಡ್ಡದಾಗಿ ಬಿಡಿಸಿರುವ ಹೂಗಳೂ ಗೋಡೆಯ ನಡುವೆ ಅಡ್ಡಲಾಗಿ ಮತ್ತೊಂದು ಕಾರ್ನೀಸಿನ ಪಟ್ಟಿಕೆಯೂ ಇದ್ದು ಈ ಪಟ್ಟಿಕೆಯಿಂದ ಮೇಲೆದ್ದಿರುವ ಅರೆಗಂಬಗಳು ಗಂಟೆಯ ಆಕೃತಿಯನ್ನು ತಾಳಿ ಮೇಲೆ ಚೌಕ ಬೋದಿಗೆಯನ್ನು ಹೊಂದಿವೆ. ಲೋವೆ ಕಿರಿದಾಗಿದ್ದು ಅದರ ಮೇಲೆ ಅಲ್ಲಲ್ಲಿ ದಂತಾಕೃತಿಗಳಿವೆ. ಗರ್ಭಗೃಹಗಳ ಮೇಲೆ ಅಂತಸ್ತುಗಳಾಗಿ ಮೇಲೆದ್ದಿರುವ ಚೌಕವಿನ್ಯಾಸದ ಗೋಪುರಗಳಿವೆ. ಲೋವೆಯ ಮುಂಭಾಗದಲ್ಲಿ ಗೋಪುರದ ಮುಂಚಾಚಿದ ಭಾಗಗಳಲ್ಲಿ ಅಚ್ಚುಪಟ್ಟಿಗಳಿವೆ. ಆದರೆ ಈ ದೇವಾಲಯದ ಯಾವ ಭಾಗದಲ್ಲಿಯೇ ಆಗಲಿ ಮೂರ್ತಿಶಿಲ್ಪಗಳಾಗಲಿ, ಬಳ್ಳಿಸುರುಳಿಯಾಕೃತಿಗಳಾಗಲಿ ಇಲ್ಲ. ಎಲ್ಲವೂ ನೇರ, ಸರಳ. ಮುಂದಣ ತೆರೆದ ಮಂಟಪಗಳು ಒಂದೇ ರೀತಿಯ ಉರುಳೆಯಾಕಾರದ ದಪ್ಪ ಕಂಬಗಳಿಂದ ಕೂಡಿವೆ. ಒಂದೊಂದು ಕಂಬಕ್ಕೂ ಚೌಕನಾದ ಬುಡ, ಅದರ ಮೇಲೆ ಅಷ್ಟಮುಖ, ಅನಂತರ 16 ಮುಖಗಳ ಪಟ್ಟಿಕೆಗಳು ಇದ್ದು, ಉಳಿದಂತೆ ಉರುಳೆಯಾಕಾರದ ದಿಂಡನ್ನು ಹೊಂದಿದೆ. ಪ್ರತಿ ಅಂಕಣದ ಚಾವಣಿಯೂ ಎರಡು ವರಿಸೆ ಮೂಲೆಗಲ್ಲುಗಳನ್ನು ಸೇರಿಸಿ, ಮೇಲೆ ಅರಳಿದ ಕಮಲದಾಕೃತಿಯನ್ನು ಕಂಡರಿಸಿರುವ ಮುಚ್ಚಿಕೆಗಳಿಂದ ಕೂಡಿದೆ. ಸುಕನಾಸಿ ಮತ್ತು ಗರ್ಭಗೃಹಗಳ ಚಾವಣಿಗಳೂ ಹೀಗೆಯೇ. ಅವುಗಳ ಬಾಗಿಲುವಾಡಗಳೂ ಬಹುಮಟ್ಟಿಗೆ ಸರಳ. ಎರಡು ಕಡೆಯ ದ್ವಾರಬಂಧಗಳ ಮೇಲೆ ಸರಳವಾದ ಅರೆಗಂಬಗಳು, ಮೇಲೆ ಕಾರ್ನೀಸು ಮತ್ತು ಅರೆಗೋಪುರಾ ಕೃತಿಗಳಿಗಾಗಿ ಅಲ್ಲಲ್ಲಿ ಅಚ್ಚುಪಟ್ಟಿಗಳಿವೆ. ಗರ್ಭಗುಡಿಗಳಲ್ಲಿ ಈಗ ಲಿಂಗಗಳಿಲ್ಲ. ಆದರೆ ದುಂಡಾಗಿ ಸುಂದರವಾಗಿ ಕಂಡರಿಸಿದ ಪಾಣಿಪೀಠಗಳು ಬುಡಮೇಲಾಗಿ ಬಿದ್ದಿವೆ. ಸುಕಾನಾಸಿಗಳ ಬಾಗಿಲಿನ ಎಡಭಾಗಕ್ಕೆ ಗೋಡೆಗೆ ಸೇರಿದಂತೆ ಒಂದೊಂದು ವಿಗ್ರಹಗಳ ಪೀಠಗಳು ಇವೆ. ಅವು ಬಹುಶಃ ಶಿವಪಂಚಾಯತನ ಮೂರ್ತಿಗಳನ್ನು ಹೊಂದಿದ್ದಿರಬೇಕು,  ಆದರೆ ಈಗ ಯಾವ ಮೂರ್ತಿಯೂ ಉಳಿದು ಬಂದಿಲ್ಲ. ಸೋಮದಂಡನಾಯಕ ಈ ದೇವಾಲಯವನ್ನು ಕಟ್ಟಿಸಿದ ವಿವರಗಳನ್ನು ತಿಳಿಸುವ ದೊಡ್ಡ ಶಾಸನ ದೇವಾಲಯದ ದಕ್ಷಿಣಕ್ಕೆ ನಿಂತಿದೆ. ಇದು ಮತ್ತು ಕೇಶವ ದೇವಾಲಯದ ಶಿಲಾಶಾಸನವೂ ಹೊಯ್ಸಳರ ಶಿಲಾಶಾಸನಗಳಲ್ಲಿ ಅತಿ ಸುಂದರವಾದ ಮಾದರಿಗಳಾಗಿವೆ. ಹೊಯ್ಸಳ ರೂವಾರಿಗಳು ವೈವಿಧ್ಯಮಯವಾದ ಅಲಂಕಾರಾತಿಶಯಗಳಿಂದ ತುಂಬಿ ತುಳುಕುವಂತೆ, ಅತಿ ಸೂಕ್ಷ್ಮವಾಗಿ, ನವುರಾಗಿ, ಅತಿಯಾಯಿ ತೇನೋ ಎನ್ನುವಷ್ಟರ ಮಟ್ಟಿಗೆ ಕಂಡರಿಸಿ ದೇವಾಲಯಗಳನ್ನು ನಿರ್ಮಿಸುವಲ್ಲಿ ನಿಷ್ಣಾತರಾಗಿದ್ದುದನ್ನು ಕೇಶವ ದೇವಾಲಯ ಎತ್ತಿ ತೋರಿಸಿದರೆ ಅತ್ಯಂತ ಸರಳವಾಗಿಯೂ ಆದರೂ ಶ್ಲಾಘ್ಯವಾಗಿಯೂ ಇರುವಂತೆಯೂ ದೇವಾಲಯಗಳನ್ನು ನಿರ್ಮಿಸಬಲ್ಲವರಾಗಿದ್ದರೆಂಬುದಕ್ಕೆ ಈ ಪಂಚಲಿಂಗೇಶ್ವರ ದೇವಾಲಯ ನಿದರ್ಶನವಾಗಿದೆ. ಹೊಯ್ಸಳ ದೇವಾಲಯಗಳಲ್ಲಿಯೇ ಇದೊಂದು ಅಪೂರ್ವ ಮಾದರಿ. ಗೋವಿಂದನ ಹಳ್ಳಿಯ ಪಂಚಲಿಂಗ ದೇವಾಲಯವೂ ಇದರಂತೆಯೇ ಒಂದೇ ಸಾಲಿನಲ್ಲಿ ಐದು ದೇವಾಲಯಗಳಿದ್ದರೂ ಇದರಲ್ಲಿನ ಸರಳತೆ, ಗಾಂಭೀರ್ಯ, ಸಮಪ್ರಮಾಣ ಅದರಲ್ಲಿಲ್ಲ.

	ಕಾವೇರಿ ತೀರದಲ್ಲಿ ಸೋಮದಂಡನಾಯಕ ಕಟ್ಟಿಸಿದ ದೇವಾಲಯ ಗಳಲ್ಲಿ ಈಗ ಉಳಿದು ಬಂದಿರುವುದು ಲಕ್ಷ್ಮೀನರಸಿಂಹ ದೇವಾಲಯ ಒಂದೇ. ಕೇಶವ ದೇವಾಲಯದ ನೈಋತ್ಯಕ್ಕೆ ಸುಮಾರು ಅರ್ಧ ಕಿಮೀ ದೂರದಲ್ಲಿರುವ ಈ ದೇವಾಲಯ ಬಳಪದ ಕಲ್ಲಿನಲ್ಲಿ ನಿರ್ಮಿತವಾಗಿದೆ. ಹೆಚ್ಚು ಅಲಂಕರಣಗಳಿಲ್ಲ. ಒಂದು ಗರ್ಭಗೃಹ, ಒಂದು ಸುಕನಾಸಿ, ಒಂದು ನವರಂಗ ಮತ್ತು ಅದರ ಮುಂದೆ ಒಂದಂಕಣದ ಮುಖಭದ್ರ ವಿರುವ ಈ ದೇವಾಲಯ ತಕ್ಕಮಟ್ಟಿಗೆ ದೊಡ್ಡದಾಗಿದೆ. ಮುಖಭದ್ರದ ಎರಡು ಕಡೆಯೂ ಜಗಲಿಯಿದ್ದು ಅವಕ್ಕೆ ಹಿಂದೆ ಬಾಗಿರುವ ಕಟಾಂಜನಗಳಿವೆ.

	ಇಲ್ಲಿನ ದೇವಾಲಯಗಳು ಕಾಲಕಾಲಕ್ಕೆ ದುರಸ್ತಿ ಹೊಂದಿದವು. ವಿಜಯನಗರದ ಕಾಲದಲ್ಲಿ ಸಾಳ್ವ ನರಸನಾಯಕ ಆಳುತ್ತಿದ್ದಾಗ ಆತನ ಅಪ್ಪಣೆ ಮೇರೆಗೆ ಈ ಅಗ್ರಹಾರದ ಜೀರ್ಣೋದ್ಧಾರಕಾರ್ಯವನ್ನು ಉಮ್ಮತ್ತೂರಿನ ನಂಜರಾಜಒಡೆಯ ಕೈಕೊಂಡು 1497ರಲ್ಲಿ ಕೇಶವ ದೇವಾಲಯ, ಪಂಚಲಿಂಗ ದೇವಾಲಯಗಳ ಪೂಜೆಗೂ ಅಲ್ಲಿನ ಬ್ರಾಹ್ಮಣರ ಜೀವಿತಕ್ಕೂ ದತ್ತಿಗಳನ್ನು ದಾನ ಮಾಡಿದುದಾಗಿ ತಿಳಿದುಬರುತ್ತದೆ. ಹಿಂದೆ ಕೇಶವ ದೇವಾಲಯಕ್ಕೆ ದತ್ತಿ ಬಿಟ್ಟಿದ್ದ ಹೆಬ್ಬಕವಾಡಿ ಎಂಬ ಗ್ರಾಮ ಈ ದೇವಾಲಯದ ಕೈ ಬಿಟ್ಟಂತೆ ತೋರುತ್ತದೆ. ವಿಜಯನಗರದ ಅಚ್ಯುತರಾಯನ ಆಳಿಕೆಯಲ್ಲಿ ಆತನಿಗೆ ಪುಣ್ಯವಾಗಬೇಕೆಂದು ವಾರಾಣಸಿ ವರದಯ್ಯನೆನ್ನುವವನು ಆ ಗ್ರಾಮವನ್ನು ಪುನರ್ದತ್ತಿಯಾಗಿ ಬಿಟ್ಟಂತೆ ಶಾಸನವೊಂದು ತಿಳಿಸುತ್ತದೆ. 16ನೆಯ ಶತಮಾನದಲ್ಲಿ ಈ ಅಗ್ರಹಾರದ ಪ್ರಸಿದ್ಧಿಯನ್ನು ಕೇಳಿದ ಔಬಳರಾಜಯ್ಯನು ಅಲ್ಲಿನ ದೇವಾಲಯಗಳ ಬ್ರಾಹ್ಮಣರಿಂದ ಅರಮನೆಗೆ ಬರಬೇಕಾಗಿದ್ದ 30 ವರಹಗಳ ತೆರಿಗೆಯನ್ನು ಮನ್ನಾ ಮಾಡಿದ್ದ.

	ಈಗ ಸೋಮನಾಥಪುರದಲ್ಲಿ ಮೂಲ ಅಗ್ರಹಾರದ ಬೀದಿಗಳಾಗಲಿ, ಕೋಟೆಯ ಗೋಡೆಗಳಾಗಲಿ ಉಳಿದು ಬಂದಿಲ್ಲ. ಅಲ್ಲಲ್ಲಿ ಕೋಟೆಯ ಗೋಡೆಯ ಪಾಳನ್ನು ಮಾತ್ರ ಗುರುತಿಸಬಹುದು. ಕೇಶವ ದೇವಾಲಯದ ಮುಂದೆ ಅದರ ಈಶಾನ್ಯಕ್ಕೆ ಮಾತ್ರ ಈಗಿನ ಹಳ್ಳಿ ಸೀಮಿತಗೊಂಡಿದೆ. ಹಿಂದಿನ ಕಾಲದ ಕಟ್ಟಡಗಳಲ್ಲಿ ಕೇಶವ ದೇವಾಲಯವೊಂದನ್ನು ಬಿಟ್ಟು ಉಳಿದುವು ಕೇಳುವವರಿಲ್ಲದಂತಾಗಿವೆ. ಪಂಚಲಿಂಗೇಶ್ವರ ಮತ್ತು ಲಕ್ಷ್ಮೀನರಸಿಂಹ ದೇವಾಲಯಗಳು ಹೆಚ್ಚು ಶಿಥಿಲಾವಸ್ಥೆಯಲ್ಲಿ ಉಳಿದು ಬಂದಿದ್ದರೆ ಸೋವಲೇಶ್ವರ, ನರಸಿಂಹೇಶ್ವರ ಮತ್ತು ಯೋಗನಾರಾಯಣ ದೇವಾಲಯಗಳು ಅವುಗಳಿದ್ದ ಕುರುಹೂ ಉಳಿಯದಂತೆ ನಾಶವಾಗಿವೆ. ಈಗ ಲಕ್ಷ್ಮೀನರಸಿಂಹ ದೇವಾಲಯದ ಬಳಿ ಬಿದ್ದಿರುವ ಯೋಗ ನಾರಾಯಣನ ಮೂರ್ತಿ ಬಹುಶಃ ಯೋಗನಾರಾಯಣ ದೇವಾಲಯಕ್ಕೆ ಸೇರಿದ್ದುದಾಗಿರಬೇಕು. ಕೇಶವ ದೇವಾಲಯವೂ ವಿಜಯನಗರದ ಕಡೆಯ ಕಾಲದ ಹೊತ್ತಿಗೆ ಶಿಥಿಲವಾಗಿದ್ದಿರಬೇಕು. ಬಹುಶಃ 16ನೆಯ ಶತಮಾನದಲ್ಲಿ ಪ್ರಾಕಾರಕ್ಕೆ ಸೇರಿದ ಉತ್ತರ ಪಶ್ಚಿಮ ಭಾಗಗಳ ಸುತ್ತಾಲಯದ ಭಾಗಗಳು ಬಿದ್ದುಹೋಗಿದ್ದು ಅವನ್ನು ಪುನರ್ನಿರ್ಮಿಸ ಲಾಗಿದೆ. ಮೊದಲಿದ್ದ ಬಳಪದ ಕಲ್ಲಿನ ಗುಂಡು ಕಂಬಗಳಿಗೆ ಬದಲಾಗಿ ಒರಟಾದ ಕಗ್ಗಲ್ಲಿನ ಚೌಕ ಕಂಬಗಳನ್ನೂ ಚಾವಣಿಗೆ ಒರಟು ತೊಲೆಗಳನ್ನೂ ಬಳಸಿದೆ. ಬಹುಶಃ ಇದೇ ಕಾಲದಲ್ಲಿಯೇ ದೇವಾಲಯದ ಮುಂದಿನ ಉನ್ನತವಾದ ದೀಪಸ್ತಂಭವನ್ನೂ ಪೂರ್ವದಿಕ್ಕಿನಲ್ಲಿ ದೇವಾಲಯದಿಂದ ಸು.100 ಮೀ ಅಂತರದಲ್ಲಿ ನಿಂತಿರುವ ಮಂಟಪವನ್ನೂ ನಿರ್ಮಿಸಿರಬೇಕು. 19ನೆಯ ಶತಮಾನದಲ್ಲಿ ಆಂಗ್ಲವಿದ್ವಾಂಸರು ಈ ದೇವಾಲಯದ ಬಗೆಗೆ ತಾಳಿದ ಆಸಕ್ತಿ ಮತ್ತು ಅವರು ಇದನ್ನು ವರ್ಣಿಸಿ ವಿವರಗಳನ್ನು ಪ್ರಕಟಿಸಿದ ಫಲವಾಗಿ ಆಗಿನ ಮೈಸೂರು ಸರ್ಕಾರ ಈ ದೇವಾಲಯವನ್ನು ಸ್ವಲ್ಪಮಟ್ಟಿಗೆ ದುರಸ್ತಿ ಪಡಿಸಿತು. ಮುಂದೆ 1924ರಲ್ಲಿ ಹೆಚ್ಚಿನ ಉದ್ಧಾರಕಾರ್ಯ ನಡೆಯಿತು. ಮಹಾದ್ವಾರದ ಎರಡು ಕಡೆಯೂ ಬಿದ್ದುಹೋಗಿದ್ದ ಸುತ್ತಾಲಯದ ಗುಡಿಗಳನ್ನು ತೆಗೆದುಹಾಕಲಾಯಿತು; ಮಹಾದ್ವಾರವನ್ನು ಸರಿಪಡಿಸಲಾ ಯಿತು ಮತ್ತು ಮೂಲದೇವಾಲಯವನ್ನು ಭದ್ರಪಡಿಸಲಾಯಿತು. 1953ರಲ್ಲಿ ಈ ದೇವಾಲಯದ ಒಳಭಾಗದ ಅಪರಿಮಿತ ಸೌಂದರ್ಯವನ್ನು ನೋಡಿ ಆನಂದಿಸಲು ಅನುಕೂಲವಾಗುವಂತೆ ವಿದ್ಯುದ್ದೀಪದ ಸೌಕರ್ಯವನ್ನೊದಗಿ ಸಲಾಯಿತು. ಈಗ ಈ ದೇವಾಲಯ ಕೇಂದ್ರ ಸರ್ಕಾರದ ರಕ್ಷಣೆ ಗೊಳಪಟ್ಟು ಸುಸ್ಥಿತಿಯಲ್ಲಿಡಲ್ಪಟ್ಟಿದೆ.		
		(ಎಮ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ